ಅಪಮಿಶ್ರಣ		 
	
ಒಂದು ಪದಾರ್ಥವನ್ನು ಕಡಿಮೆದರ್ಜೆಯ ಅಥವಾ ಹಾನಿಕರ ಪದಾರ್ಥಗಳೊಡನೆ ಸೇರಿಸಿ ಕೀಳ್ಬೆರಕೆ ಮಾಡುವುದು (ಅಡಲ್ಟರೇಷನ್) ಅಂದರೆ ಆ ಪದಾರ್ಥದ ದರ್ಜೆಯನ್ನು ಕಡಿಮೆ ಮಾಡುವುದು. ಅಪಮಿಶ್ರಣ ಮಾಡಿ ಮಾರುವವನು ತನ್ನ ಅನುಕೂಲಕ್ಕೆ ತಕ್ಕಂತೆ ಪದಾರ್ಥದ ತೂಕ ಪ್ರಮಾಣ ಬಣ್ಣ ವಾಸನೆ ಇತ್ಯಾದಿಗಳಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆಯನ್ನು ಮಾಡಲು ಸಾಧ್ಯ. ಇದರಿಂದ ಬಳಕೆದಾರನಿಗೆ ನಷ್ಟ; ಹಣ ಹೆಚ್ಚು ಖರ್ಚಾಗುತ್ತದೆ; ಉಪಯೋಗ ಕಡಿಮೆ.
	
ಈಗೀಗ ಅಪಮಿಶ್ರಣ ಹೆಚ್ಚುತ್ತಿದೆ. ವಿಜ್ಞಾನದ ಮತ್ತು ಔದ್ಯಮಿಕ ಕಲೆಯ ಅಭಿವೃದ್ಧಿಯಿಂದ ಈ ಅಭ್ಯಾಸಕ್ಕೆ ಒಂದು ಪ್ರಚೋದನೆ ದೊರಕಿದೆ. ಜಿಡ್ಡುತೆಗೆದ ಹಾಲಿನ ಪುಡಿಯಿಂದಾದ  ಹಾಲನ್ನು ಅಪ್ಪಟ ಹಾಲೆಂದು ಮಾರುವುದು. ಅದಕ್ಕೆ ಬಾದಾಮಿ ವಾಸನೆಯನ್ನು ಮಾತ್ರ ಸೇರಿಸಿ ಬಾದಾಮಿ ಹಾಲೆಂದು ಮಾರುವುದು. ಬೆಣ್ಣೆಗೆ ವನಸ್ಪತಿಯನ್ನು ಬೆರೆಸುವುದು. ಅಚ್ಚ ರೇಷ್ಮೆಯೊಂದಿಗೆ ಕೃತಕರೇಷ್ಮೆಯ ಬೆರಕೆ. ಹೀಗೆ ನೂರು ರೀತಿಯ ಅಪಮಿಶ್ರಣ ನಡೆಯುತ್ತಿದೆ. ನಕಲಿ ಮಾಲುಗಳು ಬಿಕರಿಗೆ ಬರುತ್ತಿವೆ. ಆಹಾರದಲ್ಲೂ ಇತರ ಪದಾರ್ಥಗಳಲ್ಲೂ ಮುಖ್ಯವಾಗಿ ಔಷಧಿಗಳಲ್ಲೂ ಅಪಮಿಶ್ರಣವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ನಿಯಂತ್ರಣವಿರಬೇಕು. ಸರ್ಕಾರ ಈ ಬಗ್ಗೆ ಅನೇಕ ಕಟ್ಟಳೆಗಳನ್ನು ಮಾಡಿದರೂ ಜನರಲ್ಲಿ ಪ್ರಾಮಾಣಿಕತೆ ಹೆಚ್ಚುವವರೆಗೆ ಅಪಮಿಶ್ರಣ ನಿಲ್ಲಲಾರದು. ಸುಸಂಘಟಿತವಾದ ಪರೀಕ್ಷೆಯಿಂದಲೂ ಮೌಲ್ಯ ಪ್ರಮಾಣಗಳನ್ನು ನಿರ್ಧರಿಸುವುದರಿಂದಲೂ ಪದೇಪದೇ ಪರಿಶೀಲನೆ ನಡೆಸುವುದರಿಂದಲೂ ಈ ಉದ್ದೇಶವನ್ನು ಸಾಧಿಸಬಹುದು. ಭಾರತದಲ್ಲಿ ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್‍ಟಿಟ್ಯೂಟ್ ಈ ದಿಶೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. 

(ಸಿ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ